ಪಲೇಕ್ವಿಯಮ್ -
ಸಪೋಟೇಸೀ ಕುಟುಂಬಕ್ಕೆ ಸೇರಿದ ಸಸ್ಯ. ಪಲೇಕ್ವಿಯಮ್ ಗಟ ಇದರ ಶಾಸ್ತ್ರೀಯ ಹೆಸರು. ಉಷ್ಣವಲಯದಲ್ಲೆಲ್ಲ ಇದನ್ನು ಕಾಣಬಹುದು. ಫಿಲಿಪೀನ್ಸ್, ಮಲಯ, ಬೋರ್ನಿಯ, ಸುಮಾತ್ರಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಭಾರತದಲ್ಲಿ ಉತ್ತರ ಕನ್ನಡ ಜಿಲ್ಲೆ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಇದನ್ನು ಕೊಂಚಮಟ್ಟಿಗೆ ಕಾಣಬಹುದು. ಎಲೆಗಳು ಸರಳ ರೀತಿಯವು, ಹೂಗಳೂ ಚಿಕ್ಕವು, ಎಲೆಗಳ ಕಂಕುಳಿನಲ್ಲಿ ಅರಳುವುವು. ಪ್ರತಿ ಹೂವಿನಲ್ಲಿ 6 ದಳಗಳು, 12 ಕೇಸರಗಳು, 6 ಕಾರ್ಪೆಲುಗಳಿಂದ ರಚಿತವಾದ ಉಚ್ಚಸ್ಥಾನದ ಅಂಡಾಶಯ ಇವೆ. ಕಾಯಿ ಬೆರಿ ಮಾದರಿಯದು. ಪಲೇಕ್ವಿಯಮ್ ಮರದಿಂದ ಒಂದು ಬಗೆಯ ಹಾಲ್ನೊರೆಯನ್ನು (ಲೇಟೆಕ್ಸ್)ಪಡೆಯಬಹುದು. ಮಲಯ, ಬೋರ್ನಿಯೊ, ಸುಮಾತ್ರಗಳಲ್ಲಿ ಮರಗಳಿಗೆ ಕಚ್ಚು ಹಾಕಿ ಗಾಯ ಮಾಡಿ ಹಾಲನ್ನು ಸಂಗ್ರಹಿಸಿ ನೀರಿನಲ್ಲಿ ತೊಳೆದು ಬಿಸಿ ಮಾಡಿ ಬರುವ ಘನೀಕರಿಸಿದ ದ್ರವವನ್ನು ತೆಗೆದು ಆರಿಸಿ ನೀರಿನ ಅಂಶವನ್ನು ತೆಗೆದು ಹಾಕಿ ತೆಳ್ಳನೆಯ ಪದರುಗಳುಳ್ಳ ಹಾಳೆಗಳಾಗಿ ಮಾಡುತ್ತಾರೆ. ವಾತಾವರಣದ ಆಕ್ಸಿಜನ್ನಿನೊಂದಿಗೆ. ಸೇರಿದಾಗ ಇದು ತೂಕವನ್ನು ಕಳೆದುಕೊಳ್ಳುವುದರಿಂದ ಇದನ್ನು ನೀರಿನಲ್ಲಿಡುತ್ತಾರೆ. ಇದು ನೀರಿಗಿಂತ ಭಾರ. ಇದು ಅತಿ ಕಡಿಮೆ ವಿದ್ಯುತ್ ವಾಹಕವುಳ್ಳದ್ದಾಗಿರುವುದರಿಂದ ಹಾಗೂ ಉಪ್ಪುನೀರಿಗೆ ಬಗ್ಗದೆ ಯಾವುದೇ ರೀತಿಯ ಬದಲಾವಣೆಗೆ ಒಳಗಾಗದೆ ಇರುವುದರಿಂದ ಜಲಾಂತರ್ಗಾಮಿಗಳಲ್ಲಿ ಹಾಗೂ ಸಮುದ್ರದಲ್ಲಿ ಹಾಕುವ ವಿದ್ಯುತ್ ಹಾಗೂ ದೂರವಾಣಿಯ ತಂತಿಗಳಲ್ಲಿ ನಿರೋಧಕದಂತೆಯೂ ಸೀಸೆಗಳು ಬಿರಡೆಗಳ ಮತ್ತು ಗಾಲ್ಫ್ ಚಂಡುಗಳ ತಯಾರಿಕೆಯಲ್ಲೂ ಇದನ್ನು ಉಪಯೋಗಿಸುವುದಿದೆ.
(ಡಿ.ಜಿ.ಎಸ್.)
(ಪರಿಷ್ಕರಣೆ : ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ